ಧ್ಯಾನ ಮಾಡುತ್ತಿರುವಾಗ ಮನಸ್ಸಿನಲ್ಲಿ ಅನೇಕ ಯೋಚನೆಗಳು ಹೆಚ್ಚು ಬರುತ್ತಿರುತ್ತವೆ. ಕಾರಣವೇನು?
ಧ್ಯಾನ ಪ್ರಾರಂಭಿಸುತ್ತಲೇ ಮನಸ್ಸು ಸಂಪೂರ್ಣ ಆಲೋಚನೆರಹಿತವಾಗುವುದು ಎಂಬುದು ಸುಳ್ಳು. ಹಲವಾರು ದಿನಗಳ ಅಭ್ಯಾಸದ ನಂತರ ನಿಧಾನವಾಗಿ ಮನಸ್ಸಿನಲ್ಲಿ ಆಲೋಚನೆಗಳು ಕಡಿಮೆಯಾಗುತ್ತಾ ಬರುತ್ತದೆ. ಇದು ಉನ್ನತ ಚೇತನದ ಸ್ಥಿತಿಯಲ್ಲಿ ಪೂರ್ಣ ಕಡಿಮೆಯಾಗುತ್ತಾ ಬರುತ್ತದೆ. ಧ್ಯಾನದ ತಕ್ಷಣದ ಉದ್ದೇಶ ಮನಸ್ಸನ್ನು ಸಂಪೂರ್ಣ ಖಾಲಿ ಮಾಡುವುದಲ್ಲ. ಅದನ್ನು ಶಾಂತಗೊಳಿಸುವುದು.
ಇದನ್ನು ನಾವು ಒಂದು ಉದಾಹರಣೆಯ ಮೂಲಕ ನೋಡುವುದಾದರೆ ಒಂದು ಗಾಜಿನ ಲೋಟದಲ್ಲಿ ಮಣ್ಣು ಮಿಶ್ರಿತ ನೀರು ಇದೆ. ನೀವು ಆ ಲೋಟವನ್ನು ಅಲುಗಾಡಿಸಿದಾಗ ಆ ಮಣ್ಣು ಲೋಟದ ತುಂಬಾ ಹರಡಿ ನೀರನ್ನು ಕಲುಷಿತಗೊಳಿಸುತ್ತದೆ. ಆ ಕೊಳೆ ಬಹು ಬೇಗ ಲೋಟದ ತುಂಬಾ ಹರಡುತ್ತದೆ. ನೀವು ಸ್ವಲ್ಪ ಸಮಯ ಲೋಟವನ್ನು ತಟಸ್ಥವಾಗಿ ಇಟ್ಟರೆ ಸ್ವಲ್ಪ ಸಮಯದಲ್ಲೇ ನೀರು ಶುದ್ಧವಾಗಿ ಮಣ್ಣು ಎಲ್ಲವೂ ಅಡಿಯಲ್ಲಿ ಶೇಖರವಾಗುತ್ತದೆ. ಆಗ ಶುದ್ಧ ನೀರು ಕಾಣುತ್ತದೆ. ಹೀಗೆ ಧ್ಯಾನವನ್ನು ನಿಯಮಿತವಾಗಿ ಮಾಡುವುದರಿಂದ ಮನಸ್ಸು ಚಂಚಲತೆಯಿಂದ ದೂರವಾಗಿ ಆಲೋಚನೆಗಳು ಶಮನವಾಗುತ್ತವೆ. ಸ್ಪಷ್ಟವಾದ ದೃಷ್ಟಿ ಮೂಡುತ್ತದೆ. ನಿಮ್ಮ ಆಲೋಚನೆಗಳು ಮಣ್ಣು ತಳ ಸೇರಿದ ಹಾಗೆ ನಿಧಾನವಾಗಿ ಕಡಿಮೆಯಾಗುತ್ತಾ ಬರುತ್ತವೆ.
ಈಗ ನಾವು ಮುಖ್ಯ ವಿಷಯಕ್ಕೆ ಬರೋಣ. ಧ್ಯಾನ ಮಾಡುವಾಗ ಏಕೆ ಅನೇಕ ಆಲೋಚನೆಗಳು ಬರುತ್ತವೆ. ಅದು ಹೇಗೆ ಕಡಿಮೆಯಾಗುತ್ತದೆ?
ನಾವು ಧ್ಯಾನ ಮಾಡುವಾಗ ಕಿವಿಯಿಂದ ಶಬ್ದ ಕೇಳುವುದು ನಿಲ್ಲುವುದೇ? ಮೂಗು ವಾಸನೆ ಗ್ರಹಿಸುವುದನ್ನು ನಿಲ್ಲಿಸಲಾಗುವುದೇ? ಇಲ್ಲ. ಮನಸ್ಸಿನ ಕೆಲಸ ಆಲೋಚನೆಗಳನ್ನು ಹುಟ್ಟಿಸುವುದು. ಈ ಕ್ರಿಯೆಯನ್ನು ವೇಗವಾಗಿ ಸಂಪೂರ್ಣ ನಿಲ್ಲಿಸಲಾಗುವುದಿಲ್ಲ. ಆದರೆ ನಿಧಾನಗೊಳಿಸಬಹುದು.
ಈ ಪ್ರಶ್ನೆಗೆ ಉತ್ತರ ಇನ್ನೊಂದು ಆಯಾಮದಲ್ಲಿ ನೋಡುವುದಾದರೆ
ಮನಸ್ಸಿನಲ್ಲಿ ಏಕೆ ಇಷ್ಟೊಂದು ಆಲೋಚನೆ ಬರುತ್ತವೆ. ಉಳಿದ ಸಮಯದಲ್ಲಿ ಇಷ್ಟು ಆಲೋಚನೆಗಳು ನಮಗೆ ಏಕೆ ಬರುವುದಿಲ್ಲ?
ಇದಕ್ಕೆ ಉತ್ತರವನ್ನು ಎರಡು ಉದಾಹರಣೆಯ ಮೂಲಕ ನೋಡೋಣ..
ಸಮುದ್ರದಲ್ಲಿ ಒಂದು ಮಂಜುಗಡ್ಡೆ ತೇಲುತ್ತಿರುವುದನ್ನು ನೋಡಿರುತ್ತೇವೆ. ಆ ಮಂಜುಗಡ್ಡೆ ನೀರಿನಲ್ಲಿ ತೇಲುತ್ತಿರುವಂತೆ ನಮಗೆ ಕಾಣುತ್ತದೆ. ಆದರೆ ನಮಗೆ 10 ರಿಂದ 15% ಮಂಜುಗಡ್ಡೆಯ ಭಾಗ ಮೇಲೆ ನಮಗೆ ಕಾಣುವುದು. ಉಳಿದ ಮಂಜುಗಡ್ಡೆಯ ದೊಡ್ಡ ಭಾಗ ನೀರಿನ ಒಳಗೆ ಇರುತ್ತದೆ. ನಮಗೆ ಅದು ಕಾಣುವುದಿಲ್ಲ. ಮೇಲೆ ಕಾಣುವ ಮಂಜುಗಡ್ಡೆಯ ಸಣ್ಣ ಭಾಗವು ಚಲಿಸುವಂತೆ ಕಾಣುತ್ತದೆ. ಆದರೆ ಅದರ ಚಲನೆಯ ನಿಯಂತ್ರಣ ನಮ್ಮ ಕಣ್ಣಿಗೆ ಕಾಣದ ಮಂಜುಗಡ್ಡೆಯ ಮುಳುಗಿದ ಭಾಗದ ಮೇಲೆ ಅವಲಂಬಿತವಾಗಿರುತ್ತದೆ. ಅದು ನಮ್ಮ ಕಣ್ಣಿಗೆ ಕಾಣದಿದ್ದರೂ ಮೇಲೆ ಕಾಣುತ್ತಿರುವ 10% ಮಂಜುಗಡ್ಡೆಯ ಚಲನೆಯ ನಿಯಂತ್ರಣ ಮಾಡುತ್ತಿರುತ್ತದೆ. ಇದೇ ರೀತಿ ನಮ್ಮ ಮನಸ್ಸಿನ 90% ಭಾಗ ಸುಪ್ತಾವಸ್ಥೆಯ(subconscious mind) ಮನಸ್ಸು. 10% ಮಾತ್ರ ಜಾಗೃತ ಮನಸ್ಸು.ಹಾಗಾದರೆ ನಮ್ಮನ್ನು ಹೆಚ್ಚು ನಿಯಂತ್ರಿಸುವುದು ಸುಪ್ತಾವಸ್ಥೆಯ ಮನಸ್ಸು. ಆದ್ದರಿಂದಲೇ ನಾವು ಒಂದೊಂದು ಸಲ ಏನೊ ಘಟನೆಗಳಾದ ನಂತರ ನಾನು ಹೀಗೇಕೆ ಹೇಳಿದೆ? ನಾನು ಅಂದುಕೊಂಡದ್ದು ಒಂದು ಮಾಡಿದು ಇನ್ನೊಂದು. ಈ ರೀತಿಯ ಅನಿಯಂತ್ರಿತ ಆಲೋಚನೆಗಳನ್ನು ನಿಯಂತ್ರಿಸುವುದು ಸುಪ್ತಮನಸ್ಸು. ಇದರಿಂದ ತಿಳಿಯುವುದು ನಮ್ಮ ಆಲೋಚನೆ ಮತ್ತು ಕ್ರಿಯೆಗಳ ಕೇವಲ 10% ಮನಸ್ಸಿನ ಮೇಲೆ ಮಾತ್ರ ನಮ್ಮ ನಿಯಂತ್ರಣವಿರುತ್ತದೆ. ಉಳಿದ 90% ಸುಪ್ತ ಮನಸ್ಸಿನ ಮೇಲೆ ನಮ್ಮ ನಿಯಂತ್ರಣವಿರುವುದಿಲ್ಲ.
ಎರಡನೇಯ ಉದಾಹರಣೆ ನೋಡುವುದಾದರೆ
ನೀವು ನಿಮ್ಮ ಸ್ನೇಹಿತನೊಂದಿಗೆ ಜನನಿಬಿಡ ಪ್ರದೇಶದಲ್ಲಿ ಮಾತನಾಡುತ್ತಿದ್ದೀರಿ ಎಂದು ಭಾವಿಸಿ.ನಂತರ ನಿಮ್ಮ ಸ್ನೇಹಿತನಿಗೆ ನಿನ್ನ ಸುತ್ತಮುತ್ತ ಇರುವ ಜನರು ಏನು ಮಾತನಾಡುತ್ತಿದ್ದಾರೆ ಎಂದು ಕೇಳಿದರೆ , ನಾನು ಸರಿಯಾಗಿ ಗಮನ ಕೊಡಲಿಲ್ಲ ಎಂದು ಹೇಳುವನು. ಏಕೆಂದರೆ ಆತ ನಿಮ್ಮ ಬಳಿ ಏಕಾಗ್ರತೆಯಿಂದ ಮಾತನಾಡುತ್ತಿದ್ದನು. ಆದರೆ ನೀವು ಮೌನವಾಗಿ ಕುಳಿತುಕೊಂಡಾಗ ಸುತ್ತಮುತ್ತ ಜನರು ಏನು ಮಾತನಾಡುತ್ತಿದ್ದಾರೆ ಎಂದು ಸ್ಪಷ್ಟವಾಗಿ ಗಮನಿಸಬಹುದು. ಧ್ಯಾನದ ಸಮಯದಲ್ಲಿ ಇದೇ ಪ್ರಕ್ರಿಯೆ ನಡೆಯುವುದು. ನೀವು ಧ್ಯಾನ ಪ್ರಾರಂಭಿಸಿದ ಕ್ಷಣ ನಿಮ್ಮ ಮನಸ್ಸಿನ 10% ಜಾಗೃತ ಭಾಗ ಶಾಂತವಾಗುತ್ತದೆ. 90% ಅಚೇತನ ಮನಸ್ಸಿನಿಂದ ಉಂಟಾಗುವ ಅಲೆಗಳತ್ತ ಜಾಗೃತವಾಗುತ್ತದೆ. ಇದೇ ನಿಮಗೆ ಧ್ಯಾನಕ್ಕೆ ಕುಳಿತಾಗ ಹೆಚ್ಚು ಆಲೋಚನೆಗಳು ಬರಲು ಕಾರಣವಾಗಿದೆ.
ಈ ಆಲೋಚನೆಗಳು ನಿರಂತರ ಧ್ಯಾನಮಾಡುವ ಮೂಲಕ ಕಡಿಮೆಯಾಗುತ್ತಾ ಹೋಗುತ್ತದೆ. ಅಲೆಗಳ ಶಬ್ದ ಶಮನಗೊಳ್ಳುತ್ತಾ ಸಾಗುತ್ತದೆ.ಮನಸ್ಸು ದಿನಕಳೆದಂತೆ ಸ್ಥಿತಪ್ರಜ್ಞಾವಸ್ಥೆಗೆ ತಲುಪುತ್ತದೆ. ನೀವು ಆಗ ಶಬ್ದಮಯವಾದ ಮಾರುಕಟ್ಟೆಯಲ್ಲಿಯೂ, ಶಾಂತಸ್ಥಳದಲ್ಲಿಯೂ ಒಂದೇ ರೀತಿಯಲ್ಲಿ ಧ್ಯಾನಿಸಬಹುದು. ನಿರಂತರ ಧ್ಯಾನದಿಂದ ನಿಮ್ಮಲ್ಲಿ ಶಾಂತವಾದ ಆಂತರಿಕ ಕೇಂದ್ರವು ದೃಢವಾಗುತ್ತಾ ಹೋಗುತ್ತದೆ.

